19/11/2022
ಗಂಡಸರ ದಿನವೂ ಇರಲೇ ಬೇಕು ಬಿಡಿ. ಅವರೂ ಮನುಷ್ಯರಲ್ಲಿ ಬರುತ್ತಾರೆ. ಅಂದರೆ, ಮನುಷ್ಯ, ಮಾನವ, ನಾಗರಿಕ, ಪ್ರಜೆ, ಶ್ರೀಮಂತ, ಹಿರಿಯ, ಲೀಡರ್, ಎಂದಾಗ ಕಲ್ಪನೆಗೆ ಬರುವ ಚಿತ್ರ ಮಹಿಳೆಯ ಚಿತ್ರವಂತೂ ಆಗಿರಲಿಕ್ಕಿಲ್ಲ..
ಈ gender neutral ಪದ ಬಳಕೆಗೆ ಇಂಗ್ಲೀಷ್ ಉತ್ತಮ ಭಾಷೆ, ಅದಕ್ಕೆ ಗಂಡಸರ ದಿನವೆನ್ನುವುದು ಪಾಶ್ಚಾತ್ಯರ ಅನುಕರಣೆ.
ನಮ್ಮ ಸಂಸ್ಕೃತಿಯಲ್ಲಿ, ಗಂಡಸನ್ನು ಅಪ್ಪನೆಂದು, ಅಣ್ಣನೆಂದು, ತಮ್ಮನೆಂದು, ಚಿಕ್ಕಪ್ಪ, ದೊಡ್ಡಪ್ಪ, ಮಾವ ಎಂದು ಮರ್ಯದೆಯಿಂದಲೆ, ಪ್ರೀತಿಯಿಂದಲೇ ನೋಡುತ್ತಿದ್ದೇವೆ. ಮಗ ಎಂದರೆ ಎಲ್ಲ ತಾಯಿಯರಿಗೆ ಅಚ್ಚುಮೆಚ್ಚು. ಎಲ್ಲಾ ಗಂಡಸರಿಂದ ನೊಂದರೂ ತಾಯಿಗೆ ಮಗನ ಮೇಲೆ ಕುರುಡು ಪ್ರೀತಿ. ಅದೇ ಇನ್ನೊಬ್ಬ ಗಂಡನನ್ನು ತಯಾರಿಸುವ ಪ್ರಕ್ರಿಯೆ..
ಯಾವುದೇ ಮಗ, ತಂದೆಯನ್ನು ನೋಡಿ ಕಲಿಯುತ್ತಾನೆ, ಆದ್ರೆ ತಾಯಿಯ ಸಹನೆ, ತಂದೆಯ ಬಗ್ಗೆ ತಾಯಿಯ ಅಂಕಿತದ ಮಾತು, ತಂದೆಯ ಉದಾಹರಣೆ, ತಂದೆಯ ಗತ್ತು ಗಮ್ಮತ್ತು ನೆಲೆಗೊಳಿಸಲು ಅವಳು ಆಡುವ ಮಾತು... ಮನೆಗಾಗಿ ಮಕ್ಕಳಿಗಾಗಿ ದುಡಿವ, ನಲುಗುವ ಅವಳ ಕಾಣದ ಕೈಗಳು, ಅಪ್ಪನನ್ನೇ ಎತ್ತರಿಸುತ್ತಾ ಹೋಗುತ್ತವೆ. ಸಂಸಾರದ ಎಳೆಯುವ ಎರಡು ಎತ್ತುಗಳಲ್ಲಿ ಒಂದು ಇನ್ನೊಂದಕ್ಕೆ ಸಮಭಾಗಿ ಆದರೆ, ಭಾರ ಯಾರ ಮೇಲೆ ಜಾಸ್ತಿ ಕಮ್ಮಿಗಿಂತ, ಭಾರ ಹೊತ್ತ ಹೆಗಲಿಗೆ ಆಸರೆ ಯಾರು!?!
ನಾವು ರೂಪಿಸುವ ಗಂಡಸು ನಮಗಾಗಿ ಮಿಡಿಯುವ ಹೃದಯವಂತ ಮಗನಾಗ ಬೇಕು ನಿಜ. ಅದಕ್ಕಿಂತ ಹೆಚ್ಚಾಗಿ, ನಮ್ಮನ್ನು ಗೌರವಿಸಿ ಆದರಿಸುವ, ನಮ್ಮನ್ನು ಅನುಸರಿಸುವ ಹಾಗಾದರೆ?
ಅವಕಾಶ ವಂಚಿತ ಮಹಿಳೆಯರಿಗೆ, ಅವರಿಗಿರುವ ಅವಕಾಶಗಳ ಅರಿವೂ ಇಲ್ಲದೆ, ಗುಲಾಮರಾಗಿ, ಸಿಗುವ ಸ್ವಲ್ಪ ಅವಕಾಶಕ್ಕೆ ದೇಹಿ ಎಂದು, ಗಂಡಸರ ದಿನಕ್ಕೆ ಅವರಿಗಾಗುವ ಅನ್ಯಾಯಗಳ ಪರ ವಹಿಸಿ ಒಂದು ಸಣ್ಣ ಬರಹ..