10/06/2019
ಆರೋಗ್ಯದ ಆರೈಕೆಯ ವಿಷಯ ಬಂದಾಗ ನಿಸರ್ಗದಲ್ಲಿರುವ ಹಲವಾರು ಸಸ್ಯಗಳು ಅದ್ಭುತವಾದ ಆರೈಕೆ ನೀಡುತ್ತವೆ ಎಂಬುದು ನಮಗೆ ತಿಳಿದಿರುವ ವಿಚಾರ, ಆದರೆ ಇವೆಲ್ಲಕ್ಕಿಂತಲೂ ಒಂದು ಹೆಜ್ಜೆ ಮುಂದಿರುವ ಲೋಳೆಸರ ಅನೇಕ ವಿಧದ ಔಷಧೀಯ ಗುಣಗಳಿಂದಲೇ ಹೆಸರುವಾಸಿಯಾಗಿದೆ, ಇವೆಲ್ಲದಕ್ಕೆ ಕಾರಣವಿಷ್ಟೇ, ಇವು ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ಜೊತೆಗೆ ಚರ್ಮದ ಆರೈಕೆಗೆ ಬೇಕಾದ ಸಮೃದ್ಧ ಪೋಷಕಾಂಶಗಳು ಬಹಳಷ್ಟು ಇದರಲ್ಲಿರುವುದೇ ಈ ಪಟ್ಟ ಸಿಗಲು ಕಾರಣವಾಗಿದೆ.
ಅಷ್ಟೇ ಏಕೆ ಲೋಳೆಸರದ (ಅಲೋವೆರಾ) ಉಪಯೋಗಗಳ ಪಟ್ಟಿ ಮಾಡಿದರೆ ಬಹಳ ದೊಡ್ಡ ಪಟ್ಟಿಯೇ ತಯಾರಾಗುತ್ತದೆ. ಕೂದಲು ಮತ್ತು ಚರ್ಮಕ್ಕೆ ಇದು ನೀಡುವ ಪೋಷಣೆ ಬೇರೆ ಯಾವುದೇ ಕೃತಕ ಪ್ರಸಾಧನಕ್ಕಿಂತಲೂ ಉತ್ತಮವಾಗಿದೆ.
ಅಲ್ಲದೆ, ಚಿಕ್ಕಪುಟ್ಟ ಗಾಯಗಳಾದರೆ ಲೋಳೆಸರದ ರಸ ಹೆಚ್ಚಿಕೊಂಡರೆ ಕೂಡಲೇ ರಕ್ತ ಒಸರುವುದು ನಿಲ್ಲುತ್ತದೆ. ಸುಟ್ಟ ಗಾಯದ ಉರಿಯನ್ನು ತಣಿಸುತ್ತದೆ. ಜೀರ್ಣಕ್ರಿಯೆಯಲ್ಲಿ ಹೆಚ್ಚಳ, ದೇಹಕ್ಕೆ ಲಭಿಸಿದ ಶಕ್ತಿಯಲ್ಲಿ ಏರಿಕೆ, ರೋಗ ನಿರೋಧಕ ಶಕ್ತಿಯ ಹೆಚ್ಚಳ ಮೊದಲಾದ ಆರೋಗ್ಯಕರ ಆಗರವೇ ಇದರಲ್ಲಿ ಅಡಗಿದೆ... ಬನ್ನಿ ಈ ಸಸ್ಯದ ಔಷಧೀಯ ಚಿಕಿತ್ಸಾತ್ಮಕ ಗುಣಗಳ ಬಗ್ಗೆ ಇನ್ನಷ್ಟು ತಿಳಿಯೋಣ...
ಸಂಧಿವಾತ
ಮೂಳೆಗಳಲ್ಲಿರುವ ಸೈವೊನಿಯರ್ ಅಂಶ ಒಣಗಿದಾಗಲೇ ಕೀಲುಗಳಲ್ಲಿ ನೋವುಂಟಾಗಿ ಸಂಧಿವಾತಕ್ಕೆ ಕಾರಣವಾಗುತ್ತದೆ. ಈ ಅಂಶ ಮೂಳೆಗಳು ಒಂದಕ್ಕೊಂದು ತಾಗಿ ಸವೆಯುವುದನ್ನು ತಪ್ಪಿಸುತ್ತದೆ. ಆದರೆ ಈ ಅಂಶ ಒಣಗಿದರೆ ನೋವು, ಉರಿಯುಂಟಾಗುತ್ತದೆ. ಲೋಳೆಸರದಲ್ಲಿನ ಫಂಗಸ್ ವಿರೋಧಿ ಅಂಶ ಮತ್ತು ಉರಿ ನಿವಾರಕ ಅಂಶ ಈ ಸಮಸ್ಯೆಗೆ ಉತ್ತರ ಹೇಳುತ್ತದೆ.
ಸಂಧಿವಾತಕ್ಕೆ ಪರಿಣಾಮಕಾರಿ ಉತ್ತರ ಕಂಡುಕೊಳ್ಳಲು 2 ಚಮಚ ಲೋಳೆಸರವನ್ನು ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳಬೇಕು. ಊಟಕ್ಕೆ ಮುನ್ನ 30 ನಿಮಿಷದ ಮುಂಚೆ ಇದನ್ನು ತೆಗೆದುಕೊಳ್ಳಬೇಕು. ಅಲ್ಲದೆ ಈ ಲೋಳೆಸರವನ್ನು ನೋವಿರುವ ಜಾಗದಲ್ಲಿ ಹಚ್ಚಿಕೊಂಡರೆ ನೋವು ಕಡಿಮೆಯಾಗುವುದಲ್ಲದೆ ತಿಂಗಳಿನಲ್ಲಿ ಇದರ ಉತ್ತಮ ಫಲಿತಾಂಶ ದೊರಕಲಿದೆ.
ರೋಗಾಣು ಪ್ರತಿಬಂಧಕ
ಲೋಳೆಸರ ಅತೀ ಪ್ರಬಲವಾದ ರೋಗಾಣು ಪ್ರತಿಬಂಧಕ (antibacterial) ಮತ್ತು ಸೋಂಕು ನಿರೋಧಕ (antiseptic) ಗುಣಲಕ್ಷಣಗಳನ್ನು ಹೊಂದಿರುವುದರಿಂದ, ತ್ವಚೆಯ ಬಿರುಕುಗಳು, ಗಾಯಗಳು, ಕೀಟಾಣುಗಳ ಕಡಿತ, ಮತ್ತು ಸಣ್ಣ ವೃಣಗಳ ಸಮಸ್ಯೆಗೆ ಬಹು ಪರಿಣಾಮಕಾರಿಯಾಗಿ ಕಾರ್ಯವಿರ್ವಹಿಸುತ್ತದೆ. ಅಷ್ಟೇ ಅಲ್ಲದೆ, ಲೋಳೆಸರ ದ್ರವದಲ್ಲಿ ಗಾಯವನ್ನು ಉರಿಮುಕ್ತಗೊಳಿಸುವ ಸಾಮರ್ಥ್ಯದ ಜೊತೆ, ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಯೂ ಕೂಡ ಇರುವುದರಿಂದ, ಯಾವುದೇ ರೀತಿಯ ಗಾಯದ ಸಮಸ್ಯೆಯನ್ನು ಶೀಘ್ರ ಶಮನಗೊಳ್ಳುತ್ತದೆ
ಮೊಡವೆಯ ಕಲೆ
ಒಂದು ವೇಳೆ ಬಿಸಿಲು ಅಥವಾ ಹಳೆಯ ಮೊಡವೆ ಚಿವುಟಿದ್ದರ ಪರಿಣಾಮವಾಗಿ ತ್ವಚೆಯ ಮೇಲೆ ಕಲೆ ಉಳಿದುಕೊಂಡಿದ್ದರೆ ರಾತ್ರಿ ಮಲಗುವ ಮುನ್ನ ಲೋಳೆಸರವನ್ನು ಕೊಂಚ ವೃತ್ತಾಕಾರದಲ್ಲಿ ಕಲೆಯ ಮೇಲೆ ಹಚ್ಚಿ ಮಲಗಿ. ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ನಿಧಾನವಾಗಿ ಕಲೆಗಳು ಮಾಯವಾಗುತ್ತವೆ.
ತ್ವಚೆಯ ಆರ್ದ್ರತೆಗೆ
ಮುಖದ ಚರ್ಮಕ್ಕೆ ಆರ್ದ್ರತೆ ನೀಡಲು ಲೋಳೆಸರಕ್ಕಿಂತ ಉತ್ತಮವಾದ ಇನ್ನೊಂದು ವಸ್ತುವಿಲ್ಲ. ಇದರ ನಿಯಮಿತ ಬಳಕೆಯಿಂದ ಚರ್ಮಕ್ಕೆ ಅಗತ್ಯವಾಗಿರುವ ಆರ್ದ್ರತೆ ಲಭಿಸುತ್ತದೆ. ಇದನ್ನು ಯಾವುದೇ ವಿಧದ ಚರ್ಮದವರೂ ಯಾವುದೇ ಅಳುಕಿಲ್ಲದೇ ಬಳಸಬಹುದು.