15/08/2022
ಸ್ವಾತಂತ್ರ್ಯದ ಅಮೃತ ಮಹೋತ್ಸವ
ರಚನೆ : ಡಾ||ಮೇಡ ಪ್ರಶಾಂತ
ನಾನಿಂದು ಹಾರಿಸಿದೆ ಗರ್ವದಿಂದೆಮ್ಮಯ ಬಾವುಟವ|
ತಿರುಗಿಸಿದೆ ಸ್ವಾತಂತ್ರ್ಯ ಯಾನದ ಇನ್ನೊಂದು ಪುಟವ||
ಅದೇಕೋ ಕಾಣೆ ಎಪ್ಪತ್ತೈದರೆನಿತು ಇವರೆಲ್ಲರೀ ಲೆಕ್ಕವ|
ನಮ್ಮ ಸನಾತನ ದೇಶ ಕಟ್ಟಿ ಹಾಕಲು ಸಂಖ್ಯೆಯೊಂದರ ಮಿತವ||
ಅದೇಕೋ ಕಾಣೆ ಹಕ್ಕುಗಳಿಗಷ್ಟೇ ದಕ್ಕಿಸಿದರು ಸ್ವಾತಂತ್ರ್ಯವ|
ಭಾದ್ಯತೆ, ಕರ್ತವ್ಯಗಳ ಅದೆಲ್ಲಿ ಕಾಣೆಮಾಡಿಸಿದರೆಲ್ಲವ||
ಅದೇಕೋ ಕಾಣೆ, ಹೇರಿಹೆವು ಗಡಿ ಕಾಯ್ವನ ಮೇಲೆ ಜೀವ ತೊರೆಯುವ ಸ್ವಾತಂತ್ರ್ಯವ|
ಮರೆತಿಹೆವು, ಸಾಯ್ವರು ಬರೀ ಸಂಖ್ಯೆಯಲ್ಲ, ಅವರದೂ ನಮ್ಮಂತೆ ಜೀವ||
ಅದೇಕೋ ಕಾಣೆ, ಧೋರಣೆ ಸಾರಲು ಮಾತ್ರ ಜಾತ್ಯತೀತದ ಸ್ವಾತಂತ್ರ್ಯವ|
ಮೀಸಲಾತಿ ಮಾತ್ರ ಜಾತ್ಯಾಧಾರಿತ, ಕಾಣಲಿಲ್ಲ ಅದರಲ್ಲಿಯ ನ್ಯಾಯವ||
ಅದೇಕೋ ಕಾಣೆ ತಂತು ಶ್ರಮವಿಲ್ಲದೆ ಬಿಟ್ಟಿ ಹಂಚುವ ಸ್ವಾತಂತ್ರ್ಯವ|
ದುಡಿವನಿಗೆ ಮಾತ್ರ ಸುಂಕಗಳ ಭಾರ ಮುಗಿಲೆತ್ತರದಿ ಪೇರಿಸಿದರು ಕರವ||
ಅದೇಕೋ ಕಾಣೆ, ತಂತಿದು ಮಾತಿನ ಧೈರ್ಯ ಸ್ವಾತಂತ್ರ್ಯವ|
ಮರೆತುಹೋದಂತೆ ಕಾನ್ಪುದು ನಾಲಿಗೆಗೆ ಮೂಳೆಯಿಲ್ಲವೆಂಬ ನಿಜವ||
ಇಲ್ಲಿ ನೋಡಿ, ಲಂಚ, ಗಲಭೆ,ಸ್ವಾರ್ಥ ಕೂಡ ಹೊಂದಿದವು ಸ್ವಾತಂತ್ರ್ಯವ|
ಆದರೆ ನಾ ಕಂಡೆ......
ಧ್ವಜ ಏರಿಸುವ ಹೆಮ್ಮೆ, ಹಿಡಿದಿಡಲಾಗದು ಎದೆಯಲುಕ್ಕುವ ಗರ್ವವ||