01/03/2026
ಬೆಳವಡಿ ರಾಣಿ ಮಲ್ಲಮ್ಮ (1650–1717)
ಶೌರ್ಯ, ಧರ್ಮ ಮತ್ತು ಸ್ವರಾಜ್ಯದ ದಿವ್ಯಗಾಥೆ
ನಮ್ಮ ಭಾರತಭೂಮಿ ರೋಚಕ ಮತ್ತು ರಕ್ತಸಿಕ್ತ ಇತಿಹಾಸದ ಮಹಾಗ್ರಂಥ. ಈ ನಾಡನ್ನು ವೀರಾಧಿವೀರರು ಆಳಿದ ಗಾಥೆ ಒಂದು ದಿಕ್ಕಾದರೆ, ಅವರನ್ನು ಮೀರಿಸುವ ಧೈರ್ಯ-ದಿಟ್ಟತನದಿಂದ ಇತಿಹಾಸವನ್ನು ಬರೆದ ವೀರನಾರಿಯರ ಕಥೆ ಮತ್ತೊಂದು ದಿಕ್ಕು. ಆ ಮಹಾನ್ ವೀರಸ್ತ್ರೀಯರಲ್ಲಿ ಅಗ್ರಸ್ಥಾನದಲ್ಲಿ ನೆನಪಾಗುವ ಹೆಸರು — ಬೆಳವಡಿ ರಾಣಿ ಮಲ್ಲಮ್ಮಾಜಿ. ಶೌರ್ಯಕ್ಕೆ ರೂಪ, ಪರಾಕ್ರಮಕ್ಕೆ ಪ್ರತೀಕ, ಹೋರಾಟಕ್ಕೆ ಜೀವಂತ ಜ್ವಾಲೆ — ಇದೇ ಬೆಳವಡಿ ಮಲ್ಲಮ್ಮಾಜಿ.
ಬೆಳವಡಿ ರಾಣಿ ಮಲ್ಲಮ್ಮಾಜಿ ಲಿಂಗಾಯತ ಪರಂಪರೆಯ ಸೋದೆ ಮನೆತನದ ಕಿರೀಟಮಣಿ. ವೀರತ್ವಕ್ಕೆ ಪರ್ಯಾಯವಾಗಿದ್ದ ಸೋದೆ ಸಾಮ್ರಾಜ್ಯದ ರಾಜ ಮಧುಲಿಂಗ ನಾಯಕ ಧೈರ್ಯ ಮತ್ತು ಘನತೆಯ ಪ್ರತಿರೂಪ; ಅವರ ಧರ್ಮಪತ್ನಿ ವೀರಮ್ಮಾಜಿ ಭಕ್ತಿಯ ಮೂರ್ತಿ. ಸುಖಸಮೃದ್ಧಿಯ ಮಧ್ಯೆ ಸಂತಾನಲಾಭದ ಕೊರಗು ಕಾಡುತ್ತಿದ್ದ ದಂಪತಿಗಳಿಗೆ ಸೊಪ್ಪಿ ಶ್ರೀ ಸಿದ್ಧಬಸವ ಮಹಾಸ್ವಾಮಿಗಳ ಆಶೀರ್ವಾದ ದೊರೆಯಿತು. ಇಷ್ಟಲಿಂಗ ಪೂಜೆ, ಹರನಾಮ ಜಪ ಮತ್ತು ವಚನಪಠಣದ ವ್ರತದ ಫಲವಾಗಿ ಮೊದಲಿಗೆ ಸದಾಶಿವ ನಾಯಕ ಜನಿಸಿದರು; ಬಳಿಕ 1650 ಅಗಷ್ಟ್ 18 ರಂದು ಮಲ್ಲಮ್ಮಾಜಿ ಜನಿಸಿದರು.
ರೂಪಲಾವಣ್ಯ ಮತ್ತು ಪ್ರಖರ ಬುದ್ಧಿಶಕ್ತಿ ಹೊಂದಿದ್ದ ಮಲ್ಲಮ್ಮಾಜಿ ಬಾಲ್ಯದಲ್ಲೇ ಅಪೂರ್ವ ಪ್ರತಿಭೆ ತೋರಿದಳು. ಐದು ವರ್ಷಕ್ಕೇ ಕನ್ನಡ, ಮರಾಠಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿ, ಹನ್ನೆರಡು ವಯಸ್ಸಿಗೆ ಕಾವ್ಯ ರಚಿಸಿದಳು. ವಾಗ್ಮಿತ್ವ, ಚಾಣಾಕ್ಷತೆ ಮತ್ತು ಗಂಭೀರ ವ್ಯಕ್ತಿತ್ವ — ಇವೆಲ್ಲವೂ ಅವಳನ್ನು ಜನ್ಮಜಾತ ನಾಯಕಿಯನ್ನಾಗಿಸಿತು.
ಮಲ್ಲಮ್ಮಾಜಿ ಯುದ್ಧಶಾಸ್ತ್ರ ಮತ್ತು ಶಸ್ತ್ರವಿದ್ಯೆಯಲ್ಲಿ ಅಪೂರ್ವ ನೈಪುಣ್ಯ ಪಡೆದಿದ್ದಳು. ಧನುರ್ವಿದ್ಯೆ, ಖಡ್ಗಯುದ್ಧ, ಅಶ್ವಸವಾರಿ—ಎಲ್ಲದರಲ್ಲೂ ಅವಳಿಗೆ ಅಸಾಮಾನ್ಯ ಪಟುತನ. ರಣರಂಗಕ್ಕೆ ಇಳಿದರೆ ಅವಳು ರಣಚಂಡಿಯೇ. ಭಯವೆಂಬ ಪದವೇ ಅವಳ ನಿಘಂಟಿನಲ್ಲಿ ಇರಲಿಲ್ಲ. ಶೌರ್ಯ ಅವಳ ಉಸಿರು; ಧರ್ಮ ಅವಳ ದಿಕ್ಕು. ಅದೇ ಸಮಯದಲ್ಲಿ ಅವಳು ಪರಮ ಹರಭಕ್ತೆ. ಹರಪೂಜೆ, ಗುರುಸೇವೆ ಪೂರ್ಣಗೊಳಿಸದೇ ಹನಿ ನೀರನ್ನೂ ಸೇವಿಸದ ಅಚಲ ನಿಷ್ಠೆ ಅವಳದಾಗಿತ್ತು. ಹದಿನಾರು ವಯಸ್ಸಿಗೆ ಬೆಳವಡಿಯ ರಾಜಕುಮಾರ ಈಶಪ್ರಭು ದೇಸಾಯಿಯೊಂದಿಗೆ ಅವಳ ವಿವಾಹ ನೆರವೇರಿತು. ಇಪ್ಪತ್ತೊಂದು ಹುಲಿಗಳನ್ನು ಹೊಡೆದು ‘ಹೆಬ್ಬುಲಿ’ ಎಂಬ ಕೀರ್ತಿಗೆ ಪಾತ್ರನಾದ ಈಶಪ್ರಭು ಪರಾಕ್ರಮದ ಪ್ರತೀಕ; ಹುಲಿಬೇಟೆಯಲ್ಲೇ ನಿಪುಣಳಾದ ಮಲ್ಲಮ್ಮಾಜಿಯ ಧೈರ್ಯ ಅವನ ಮನಸೆಳೆಯಿತು. ಇಬ್ಬರೂ ಸೇರಿ ಬೆಳವಡಿಯನ್ನು ಶಾಂತಿ-ಸಮೃದ್ಧಿಯ ದಿಕ್ಕಿನಲ್ಲಿ ಮುನ್ನಡೆಸಿದರು.
ಅದೇ ಸಮಯದಲ್ಲಿ ಕ್ರಿ.ಶ. 1676–78ರ ಕರ್ನಾಟಕ ದಂಡಯಾತ್ರೆಗೆ ಛತ್ರಪತಿ ಶಿವಾಜಿ ಮುಂದಾದರು. ತಿರುಪತಿ ಮತ್ತು ಹಂಪಿಯ ಆಶೀರ್ವಾದ ಪಡೆದು ಕೊಪ್ಪಳ ಕೋಟೆಯನ್ನು ಜಯಿಸಿ, ಬೆಳವಡಿಗೆ ಸೇರಿದ ಯಾದವಾಡದಲ್ಲಿ ಬೀಡು ಬಿಟ್ಟರು. ಶಿವಾಜಿಯನ್ನು ಸತ್ಕರಿಸಬೇಕೆಂಬ ಸಂಕಲ್ಪ ಈಶಪ್ರಭುವಿಗಿತ್ತು. ತನ್ನ ಸೈನ್ಯದ ಶಕ್ತಿಯನ್ನು ತೋರಿಸಲು ಸಜ್ಜಾದನು. ಆ ಕಾಲದಲ್ಲೇ ಬೆಳವಡಿಯಲ್ಲಿ ಮೂರು ಸಾವಿರ ವೀರವನಿತೆಯರ ಸ್ತ್ರೀಸೈನ್ಯವಿತ್ತು; ಅದಕ್ಕೆ ನಾಯಕತ್ವ ಮಲ್ಲಮ್ಮಾಜಿಯದ್ದೇ. ಇದು ಅವಳ ದೂರದೃಷ್ಟಿ ಮತ್ತು ಸಂಘಟನಾ ಸಾಮರ್ಥ್ಯದ ಸಾಕ್ಷಿ.
ಯಾದವಾಡದ ಮರಾಠ ಸೈನಿಕರು ಬೆಳವಡಿಗೆ ಸಮೀಪದ ಗೋಶಾಲೆಗೆ ನುಗ್ಗಿ ಹಾಲು ಬೇಡಿದರು. ಸತ್ಕಾರಕ್ಕಾಗಿ ಮೀಸಲಿದ್ದ ಹಾಲನ್ನು ಕೊಡಲಾಗದೆ ಗೋಪಾಲಕರು ನಿರ್ಗತಿಕರಾದರು. ಅಜ್ಞಾನದಿಂದ ಉಂಟಾದ ಉದ್ವಿಗ್ನತೆ ದಾರ್ಶ್ಟ್ಯಕ್ಕೆ ತಿರುಗಿ, ಗೋವುಗಳನ್ನು ಕೊಂಡೊಯ್ದರು. ಗೋಮಾತೆಯ ರಕ್ಷಣೆಯೇ ಧರ್ಮವೆಂದು ಕಂಡ ಮಲ್ಲಮ್ಮಾಜಿಗೆ ಇದು ಅಸಹ್ಯ ಅವಮಾನ. ದಂಡನಾಯಕ ಸಿದ್ದನಗೌಡ ಪಾಟೀಲರನ್ನು ಕಳುಹಿಸಿದರೂ, ಸಕುಜಿಯ ಕೈಯಲ್ಲಿ ಅವರು ವೀರಮರಣ ಹೊಂದಿದರು. ಆಗ ಮಲ್ಲಮ್ಮಾಜಿಯೇ ಸ್ತ್ರೀಸೈನ್ಯದೊಂದಿಗೆ ದಾಳಿ ನಡೆಸಿ ಮರಾಠರನ್ನು ಬೆಚ್ಚಿಬೀಳುವಂತೆ ಮಾಡಿದಳು. ಖಡ್ಗದ ಕಿರಿಚಿನಲ್ಲಿ ನೂರಾರು ಸೈನಿಕರು ಹಿಮ್ಮೆಟ್ಟಿದರು; ಗೋವುಗಳು ಮರಳಿ ಬಂದವು. ಬೆಳವಡಿಯಲ್ಲಿ ವಿಜಯಘೋಷ ಮೊಳಗಿತು.
ಆದರೆ ಸಕುಜಿಯ ತಪ್ಪುಮಾಹಿತಿ ಯುದ್ಧದ ಜ್ವಾಲೆಯನ್ನು ಹೆಚ್ಚಿಸಿತು. ಮದ್ದುಗುಂಡು ಬಳಸದಿರಲು ಶಿವಾಜಿಯ ಆದೇಶದ ನಡುವೆಯೇ 28 ದಿನಗಳ ಕಠಿಣ ಸಮರ ನಡೆಯಿತು. ಕೋಟೆ ಸುತ್ತುವರಿಯಲ್ಪಟ್ಟಿತು; ಒಳಗಿದ್ದವರಿಗೆ ಆಹಾರ-ಸಾಮಗ್ರಿಗಳ ಕೊರತೆ ಕಾಡಿತು. ನೆರವು ತಲುಪದೇ ನಿರಾಶರಾದ ಈಶಪ್ರಭು ಹೊರಬಂದು ಹೋರಾಡಿ ಗಂಭೀರವಾಗಿ ಗಾಯಗೊಂಡರು; ಬಳಿಕ ವೀರಗತಿಯನ್ನಪ್ಪಿದರು. ಬೆಳವಡಿಯ ಭಾರ ಮಲ್ಲಮ್ಮಾಜಿಯ ಹೆಗಲಿಗೆ ಬಿದ್ದಿತು.
ನಂತರ ಶಾಂತಯ್ಯನ ಚಾತುರ್ಯದಿಂದ ಶಿವಾಜಿ ಸಿದ್ಧಸಮುದ್ರದ ದ್ಯಾಮವ್ವ ದರ್ಶನಕ್ಕೆ ತೆರಳಿದರು. ಅದೇ ಕ್ಷಣದಲ್ಲಿ ಮಲ್ಲಮ್ಮಾಜಿ ರಣಬಿರುಗಾಳಿಯಂತೆ ದಾಳಿ ನಡೆಸಿದಳು. ಕುದುರೆ ಧರೆಗುರುಳಿದರೂ ಅವಳ ಖಡ್ಗ ನಿಲ್ಲಲಿಲ್ಲ. ಆ ಪರಾಕ್ರಮ ನೋಡಿ ಶಿವಾಜಿಯೇ ದಂಗಾದರು. ಅವಳನ್ನು ಜಗದಂಬೆಯ ರೂಪವೆಂದು ಸ್ತುತಿಸಿ ಕ್ಷಮೆ ಬೇಡಿದರು. ಸತ್ಯ ತಿಳಿದ ಶಿವಾಜಿ, ತಪ್ಪಿಗೆ ಕಾರಣನಾದ ಸಕುಜಿಗೆ ದಂಡನೆ ವಿಧಿಸಿ, ಕೋಟೆಯ ಪುನರ್‌ನಿರ್ಮಾಣ ವೆಚ್ಚ ಭರಿಸಿದರು. ಮಲ್ಲಮ್ಮಾಜಿ ಶಿವಾಜಿಗೆ ರಕ್ಷೆ ಕಟ್ಟಿದಳು; ರಕ್ಷಾಬಂಧನದ ಬಾಂಧವ್ಯ ಅಲ್ಲಿ ಅರಳಿತು. ನಾಗಭೂಷಣನ ಪಟ್ಟಾಭಿಷೇಕವೂ ಶಿವಾಜಿಯ ಸಮ್ಮುಖದಲ್ಲಿ ನೆರವೇರಿತು. ತಾರಾರಾಣಿ ಮತ್ತು ಮಲ್ಲಮ್ಮಾಜಿ ಅಕ್ಕತಂಗಿಯರಂತೆ ಸೌಹಾರ್ದದ ಸೇತುವೆ ಕಟ್ಟಿದರು. ಕರ್ನಾಟಕ–ಮಹಾರಾಷ್ಟ್ರಗಳ ನಡುವೆ ಸಾಮರಸ್ಯದ ಸಂಕಲ್ಪ ಗಾಢವಾಯಿತು.
1717 ಫೆಬ್ರವರಿ 19ರಂದು, ಅರವತ್ತೇಳನೇ ವಯಸ್ಸಿನಲ್ಲಿ ಮಲ್ಲಮ್ಮಾಜಿ ಲಿಂಗೈಕ್ಯಳಾದಳು. ಜಗತ್ತಿನ ಮೊದಲ ಸ್ತ್ರೀಸೈನ್ಯವನ್ನು ಕಟ್ಟಿದ ಶಕ್ತಿನಾಯಕಿ; ಸಂಪ್ರದಾಯದ ಕೈಗೆ ಶಸ್ತ್ರಶಕ್ತಿ ತುಂಬಿದ ಛಲಗಾತಿ; ಸ್ವರಾಜ್ಯ-ರಾಷ್ಟ್ರದ ಕನಸನ್ನು ಜೀವಂತಗೊಳಿಸಿದ ವೀರಮಾತೆ—ಇವಳೇ ಬೆಳವಡಿ ರಾಣಿ ಮಲ್ಲಮ್ಮಾಜಿ. ಫೆಬ್ರವರಿ 28ರಂದು ಆಚರಿಸುವ ಅವಳ ವಿಜಯೋತ್ಸವ, ನಮ್ಮ ನಾಡಿನ ಹೆಮ್ಮೆ; ಅವಳ ಸ್ಮರಣೆ ನಮ್ಮ ಧೈರ್ಯದ ದೀಪ.
ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹರಿಹರ.