22/10/2025
ನಿನ್ನೆಯ ಮುಂದುವರಿಕೆ...
ಭಾಗ -೨
ಬ್ಯಾಂಕಿನ (ಸಹಕಾರಿ ಸಂಘ) ಸಮೀಪದವರಲ್ಲಿ ವಿಚಾರಿಸಿ, ಸನಿಹದಲ್ಲಿಯೇ ಇದ್ದ ಸಂಘದ ಮ್ಯಾನೇಜರ್ ಮನೆಗೆ ಹೋದೆವು. ಅಲ್ಲಿ ವಿಚಾರಿಸಿದರೆ, ಈಗ ತಾನೇ ಮ್ಯಾನೇಜರ್ ತುರ್ತಾಗಿ ಶಿವಮೊಗ್ಗಕ್ಕೆ ಹೋಗಿದ್ದಾರೆ ಎಂದಳು ಮನೆಯೊಡತಿ. ಪಿಗ್ಮಿಯವರು ಗಂಗಮ್ಮನ ಹಣ ಕೊಟ್ಟಿಲ್ಲವೆಂದು, ಅವಳಿಗೆ ಹಣ ಬೇಕಾಗಿದೆ, ಪಿಗ್ಮಿ ಏಜೆಂಟರು ಫೋನಿಗೆ ಉತ್ತರಿಸುತ್ತಿಲ್ಲವೆಂದು ತಿಳಿಸಿದೆವು. ಆ ಮಹಿಳೆಯು ಕೂಡಲೇ ಅವನನ್ನು ಸಂಪರ್ಕಿಸಿ, ನಮಗೆ ಮಾತನಾಡಲು ಅವಕಾಶ ಒದಗಿಸಿದರು. ಗಂಗಮ್ಮನಿಗೆ ಹಣ ಅರ್ಜೆಂಟ್ ಬೇಕಾಗಿದೆಯೆಂದು, ಕೂಡಲೇ ಅವಳ ಪಿಗ್ಮಿ ಹಣ ಕೊಟ್ಟರೆ ಉಪಕಾರವಾಗುವುದೆಂದು, ನನ್ನ ಬಂಧುಗಳು ಏಜೆಂಟರಲ್ಲಿ ನಯವಾಗಿ ವಿನಂತಿಸಿದರು. ಅವನು ಕೂಡಲೇ, ಇಂದಿನ ಪಿಗ್ಮಿ ಹಣ ಸಂಗ್ರಹವಾದ ಕೂಡಲೇ ಸಂಜೆಯೊಳಗೆ ನಮಗೆ ತಲುಪಿಸುತ್ತೇನೆಂದು ಹೇಳಿದ. ಅವನ ಮತ್ತೊಂದು ಫೋನ್ ನಂಬರ್ ತೆಗೆದುಕೊಂಡು ಮನೆಗೆ ವಾಪಸ್ಸಾದೆವು. ಹಣ ಸಿಗುತ್ತದೆಯೆಂಬ ಭರವಸೆ ಮೂಡಿತು. ಗಂಗಮ್ಮನೂ ನಾಳೆ ಬರ್ತೀನೆಂದು ಮನೆಗೆ ವಾಪಸ್ಸಾದಳು.
ಮನೆಗೆ ಬಂದು ನಾವೆಲ್ಲರೂ ಅದೇ ವಿಷಯ ಚರ್ಚಿಸಿ, ಊಟದ ಮೊದಲು, ಗಂಟೆ 8.30 ಆದರೂ ಪಿಗ್ಮಿ ಏಜೆಂಟ್ ಬಾರದ ಕಾರಣ, ಅವನಿಗೆ ಫೋನ್ ಮಾಡಿದೆವು. ಆಗ ಉತ್ತರವಿಲ್ಲ. ಕೂಡಲೇ ಊಟ ಮುಗಿಸುವ ವೇಳೆಗೆ, ಏಜೆಂಟರೇ ಕರೆ ಮಾಡಿ, ಇನ್ನರ್ಧ ಗಂಟೇಲಿ ಬರುವುದಾಗಿ ತಿಳಿಸಿದರು.
ಗಂಟೆ 9.30, ಮನೆಯ ಗೃಹಸ್ಥರ ನೆಚ್ಚಿನ ಹನುಮಕ್ಕನವರ ಸೀರಿಯಲ್ ನೋಡುತ್ತಿರುವಾಗ, ಜೋರು ಮಳೆ ಶುರುವಾಯಿತು. ಅದೇ ಸಮಯಕ್ಕೆ ಸರಿಯಾಗಿ, ಗೇಟಿನ ಬಳಿ ಸದ್ದಾಯಿತು. ನೋಡಿದರೆ ಆತನೇ ಪಿಗ್ಮಿ ಏಜೆಂಟ್ ನಾಗಿದ್ದ. ಅತನನ್ನು ಒಳಕರೆದು, ಕುಳ್ಳರಿಸಿ, ಮಾತನಾಡಿಸಿದೆವು. ಆತನು ಗಂಗಮ್ಮನ ನಲ್ವತ್ತು ಸಾವಿರ ರೂಪಾಯಿ, ನಮ್ಮ ಬಂಧುಗಳ ಕೈಯಲ್ಲಿರಿಸಿದ. " ನಾನು ಗಂಗಮ್ಮನ ಮನೆ ಕಡೆ ಹಣ ಸಂಗ್ರಹಕ್ಕೆ ಹೋಗಲ್ಲ, ಅಲ್ಲಿ ಮೊದಲಿನ ಪಿಗ್ಮಿ ಏಜೆಂಟ್ ಕೆಲಸ ಬಿಟ್ಟಿದ್ದರಿಂದ, ನಾನು ಅನಿವಾರ್ಯವಾಗಿ ಅವರ ಮನೆಗೆ ಹೋಗ್ತಿದ್ದೆ. ನಮಗೆ ಆಯಾ ದಿನದ ಹಣ ಸಂಗ್ರಹವಾದ ನಂತರವೇ, ಈ ಪೇಮಂಟ್ ಕೊಡಲು ಸಾಧ್ಯ, ಈಗ ತಾನೇ ನನ್ನ ಡೂಟಿ ಮುಗಿಯಿತೆಂದು" ಪಿಗ್ಮಿ ಏಜೆಂಟರು ವಿಷಯವನ್ನು ತಿಳಿಸಿದರು. ನಮಗೆಲ್ಲಾ ಹುಳ್ಳ ಹುಳ್ಳಗಾಯಿತು.
ಗಂಗಮ್ಮನಿಗೆ ಬಂಗಾರ ಬಿಡಿಸಲು ತುರ್ತಾಗಿ ಹಣದ ಅಗತ್ಯವಿತ್ತು, ಆದ್ದರಿಂದ ನಾವು ಅನೇಕ ಬಾರಿ ನಿಮಗೆ ಹಲವು ಕರೆ ಮಾಡಿದೆವು ಎಂದು ಸಮಜಾಯಿಷಿ ಕೊಟ್ಟೆವು. "ನೀವು ಗಿರಾಕಿಗಳಿಗೆ ಮೊದಲೇ ಸರಿಯಾಗಿ ತಿಳಿಸಿ, ಇದರಿಂದ ಗಾಬರಿಗೊಳಗಾಗುವ ಸಂದರ್ಭ ಉಂಟಾಗುವುದಿಲ್ಲವೆಂದು" ಏಜೆಂಟರಿಗೆ ತಿಳಿಸಿದೆವು.
ಸುಖಾಂತ್ಯವಾಗಿತ್ತು. ಇಲ್ಲಿ ಯಾರೂ ಕೂಡ ತಪ್ಪಿತಸ್ಥರಲ್ಲ.
"ಫೋನ್ ಕರೆ ಸ್ವೀಕರಿಸಲಿಲ್ಲ, ಖಾಲಿ ಪೇಪರ್ ನಲ್ಲಿ ಸಹಿ ತೆಗೆದುಕೊಂಡಿದ್ದಾರೆ, ಎನ್ನುವ ಸುದ್ದಿಯು, ಈ ವ್ಯಕ್ತಿ ಹಣ ಲಪಟಾಯಿಸುವ ಹೊಂಚು ಹಾಕಿದ್ದಾನೆಂದು" ನನ್ನನ್ನು ಆಲೋಚನೆಗೆಳೆಯಿತು. ನನ್ನ ಬಂಧುಗಳು ಸಹ " ಹಣ ಸಿಗುವುದು ಕಷ್ಟ, ಗಂಗಮ್ಮನಿಗೆ ತೊಂದರೆ ಖಂಡಿತ" ಅನ್ನೋ ಅಭಿಪ್ರಾಯಕ್ಕೆ ಬಂದರು. ಮೊದಲು ಸಹಿ ಹಾಕಬಾರದಿತ್ತೆಂದರು. "ಆತನಿಗೆ ದೇವರು ಒಳ್ಳೇದು ಮಾಡಲ್ಲವೆಂಬುದು" ಗಂಗಮ್ಮನ ನಂಬಿಕೆ. ಹೀಗೆ ಒಬ್ಬೊಬ್ಬರ ದೃಷ್ಟಿಕೋನ ಒಂದೊಂದು ದಿಕ್ಕಿನಲ್ಲಿತ್ತು.
ಪಿಗ್ಮಿಯವನ ಮಾತು ಕೇಳಿದ ನಂತರ, ನಾವೆಲ್ಲ ಆತಂಕದಿಂದ ದುಡುಕಿದೆವು ಎನ್ನಿಸಿತು.
ಅಲ್ಲಲ್ಲಿ ಮೋಸ, ಸೈಬರ್ ವಂಚನೆಗಳು ಹೆಚ್ಚುತ್ತಿರುವುದರಿಂದ ನಾವು ಬಲುಬೇಗ ಆತಂಕಕ್ಕೆ ಒಳಗಾಗುತ್ತೇವೆ. ಬೇರೆಯವರ ದೃಷ್ಟಿಯಿಂದ ಆಲೋಚನೆ ಮಾಡದಷ್ಟು, ವ್ಯವಧಾನ ನಮ್ಮಲ್ಲಿ ಇರುವುದಿಲ್ಲ. ಹಣ ಕಾಸಿನ ವ್ಯವಹಾರಸ್ಥರು, ಬ್ಯಾಂಕಿನವರು ಹೆಚ್ಚಿನ ಸಂದರ್ಭದಲ್ಲಿ ನಿಷ್ಠಯಿಂದಲೇ ಇರ್ತಾರೆ. ಆದರೆ ಸರಿಯಾಗಿ ಗಿರಾಕಿಗಳಿಗೆ ತಿಳುವಳಿಕೆ ಕೊಡುವುದು ಕೂಡ ಅಗತ್ಯ, ನಮ್ಮ ದೃಷ್ಟಿಯಿಂದ ಅವರೂ ಸಹ ವಿಚಾರ ಮಾಡುವುದಗತ್ಯ.
ಮರುದಿನ ಬೆಳಿಗ್ಗೆ ಹಣ ಗಂಗಮ್ಮನ ಕೈ ಸೇರಿತು.