25/11/2025
*ಖಾಸಗಿ ಆಸ್ಪತ್ರೆಗಳ ಸ್ವರ್ಗದಲ್ಲಿ ಬಡ ರೋಗಿಗಳ ಬದುಕು ನರಕ*
9 ಖಾಸಗಿ ಮೆಡಿಕಲ್ ಕಾಲೇಜುಗಳ ಸಂಖ್ಯೆ 10 ಕ್ಕೆ ಏರಿಕೆ ಆಗುತ್ತಿರುವ ಸಂಭ್ರಮದಲ್ಲಿರುವ ದ.ಕ. ಜಿಲ್ಲೆಯಲ್ಲಿ ಕಡಿಮೆ ಆದಾಯದ ಜನಗಳು ತಮ್ಮ ಕುಟುಂಬಿಕರಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡಿದಾಗ ಪಡುವ ಪಾಡು ಯಾರಿಗೂ ಬೇಡ. ಅದರಲ್ಲಿಯೂ ಖಾಸಗಿ ಮೆಡಿಕಲ್ ಕಾಲೇಜುಗಳ ಹಿಡಿತಕ್ಕೆ ಸಿಲುಕಿರುವ ಜಿಲ್ಲಾಸ್ಪತ್ರೆ ವೆನ್ಲಾಕ್ "ಅಭಿವೃದ್ದಿ ಹೊಂದುತ್ತಿದೆ" ಎಂದು ಆಳುವ ಜನಗಳು ಸಂಭ್ರಮಿಸುತ್ತಿರುವ ಸಂದರ್ಭದಲ್ಲೆ ಕರಾವಳಿಯಲ್ಲಿ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಟ ಒಂದೊಂದಾಗಿ ಹೊರಬರುತ್ತಿದೆ. ನೋಡುವ ಕಣ್ಣು ಮೋಸ ಮಾಡಬಾರದಷ್ಟೆ.
ಜಿಲ್ಲಾಸ್ಪತ್ರೆ ವೆನ್ಲಾಕ್ ನಲ್ಲಿ "ಐಸಿಯು" ಬೆಡ್ ಸಿಗುವುದೇ ಇಲ್ಲ, ಯಾವಾಗಲು "ಐಸಿಯು ತುಂಬಿದೆ" ಎಂದು ಗಂಭೀರ ಖಾಯಿಲೆಯ ಸ್ಥಿತಿಯಲ್ಲಿರುವ ಬಡವರನ್ನು ಸಾಗಹಾಕಲಾಗುತ್ತದೆ ಎಂಬ ಆರೋಪ ಪದೇ ಪದೆ ಕೇಳಿಬರುತ್ತಿದೆ. ಇಂತಹ ರೋಗಿಯೊಬ್ಬರಿಗೆ ಐಸಿಯು ಬೆಡ್ ಒದಗಿಸಲು ನಾವು ಪಟ್ಟ ಶ್ರಮ, ರೋಗಿಯ ಕುಟುಂಬ ಪಟ್ಟ ಕಷ್ಟವನ್ನು ತಿಂಗಳ ಹಿಂದೆ ಬರೆದಿದ್ದೆ. ಈ ವಾರದಲ್ಲಿ ಅಂತಹದ್ದೆ ಮತ್ತೊಂದು ಪ್ರಕರಣ ನಮ್ಮ ಮುಂದೆ ಬಂತು.
ಬಂಟ್ವಾಳ ಕಡೆಯ ಬಡ ಕುಟುಂಬದ ವ್ಯಕ್ತಿಯೊಬ್ಬರಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ. ಅವರನ್ನು ಮಂಗಳೂರಿನ "ಕಿಸೆಗೆ ಸರ್ಜರಿ" ಮಾಡುವುದರಲ್ಲಿ ಖ್ಯಾತಿ ಪಡೆದ ಖಾಸಗಿ ಆಸ್ಪತ್ರೆಗೆ ಕರೆದು ಕೊಂಡು ಬಂದಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು, ಲೆನ್ಸ್ ನಲ್ಲಿ ಸಮಸ್ಯೆ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಐಸಿಯು ಗೆ ಅಡ್ಮಿಟ್ ಮಾಡಿ ವೆಂಟಿಲೇಟರ್ ಹಾಕಬೇಕು ಎಂದು ಹೇಳಿದ್ದಾರೆ. ವೆಂಟಿಲೇಟರ್ ಬೆಡ್ ಚಾರ್ಜ್ ಒಂದು ದಿನಕ್ಕೆ ಸುಮಾರು 30 ಸಾವಿರು ರೂಪಾಯಿ ಆಗುತ್ತದೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಯ ದರ ಕೇಳಿ ಗಾಭರಿಯಾದ ರೋಗಿಯ ಕುಟುಂಬಿಕರು ವೆನ್ಲಾಕ್ ಆಸ್ಪತ್ರೆಯನ್ನು ಸಂಪರ್ಕಿಸಿದ್ದಾರೆ. ಅಲ್ಲಿ ಯಥಾ ಪ್ರಕಾರ "ಐಸಿಯು ಬೆಡ್ ಗಳು ಹೌಸ್ ಫುಲ್ ಆಗಿವೆ" ಎಂಬ ಸಿದ್ದ ಉತ್ತರ ಸಿಕ್ಕಿದೆ. ಅಸಹಾಯಕರಾದ ರೋಗಿಯ ಕುಟುಂಬಿಕರು ರೋಗಿಯನ್ನು ಸಾಯಲು ಬಿಡಲಾಗದೆ, ಬೇರೆ ದಾರಿ ಇಲ್ಲದೆ "ಕಿಸೆಗೆ ಸರ್ಜರಿ" ಗೆ ಖ್ಯಾತ ಆಗಿರುವ ಖಾಸಗಿ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಅಡ್ಮಿಟ್ ಮಾಡಿದ್ದಾರೆ.
ಆ ತರುವಾಯ ಆ ಕುಟುಂಬದ ಪರಿಚಿತರೊಬ್ಬರು ನಮ್ಮನ್ನು ಸಂಪರ್ಕಿಸಿ ವೆನ್ಲಾಕ್ ನಲ್ಲಿ ವೆಂಟಿಲೇಟರ್ ಬೆಡ್ ಒದಗಿಸಲು ಸಹಾಯ ಮಾಡುವಂತೆ ವಿನಂತಿಸಿದ್ದಾರೆ. ಅದರಂತೆ, ನಾವು ವೆನ್ಲಾಕ್ ನ ಸಮಿತಿಯಲ್ಲಿರುವ ಒಂದಿಷ್ಟು ಮಾನವೀಯ ಕಾಳಜಿಯುಳ್ಳ ವ್ಯಕ್ತಿಗಳನ್ನು ಸಂಪರ್ಕಿಸಿದೆವು. ಅವರ ಪ್ರಯತ್ನದಿಂದ 24 ತಾಸುಗಳ ತರವಾಯ ಬಂಟ್ವಾಳದ ರೋಗಿಗೆಗೆ ವೆನ್ಲಾಕ್ ನ ಐಸಿಯು ನಲ್ಲಿ ವೆಂಟಿಲೇಟರ್ ಬೆಡ್ ಲಭ್ಯ ಆಯಿತು.
ಇಷ್ಟು ಹೊತ್ತಿಗೆ "ಕಿಸೆಗೆ ಸರ್ಜರಿ" ನಡೆಸುವುದರಲ್ಲಿ ಖ್ಯಾತ ಆಗಿರುವ ಖಾಸಗಿ ಆಸ್ಪತ್ರೆಯಲ್ಲಿ ಒಂದು ದಿನದ ಬಿಲ್ ಮೊತ್ತ 60 ಸಾವಿರ ರೂಪಾಯಿ ದಾಟಿತ್ತು. 30 ಸಾವಿರ ಅಂತ ಹೇಳಿದ್ದು ರೆಕ್ಕೆ ಪುಕ್ಕ ಸೇರಿಕೊಂಡು ಡಬ್ಬಲ್ ಆಗಿತ್ತು. ಏನೇನೊ ಕಸರತ್ತು ಮಾಡಿ ಆ ಬಡ ಕುಟುಂಬ ಖಾಸಗಿ ಆಸ್ಪತ್ರೆಯ ಬಿಲ್ ಪಾವತಿಸಿ, ರೋಗಿಯನ್ನು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಶಿಪ್ಟ್ ಮಾಡಿ ನಿಟ್ಟುಸಿರು ಬಿಟ್ಟಿತು. ಒಂದು ವೇಳೆ ವೆನ್ಲಾಕ್ ನಲ್ಲಿ ಐಸಿಯು ಬೆಡ್ ಸಿಗದೇ ಹೋಗಿದ್ದರೆ, ಒಂದು ವಾರ ಕಾಲ ಖಾಸಗಿ ಆಸ್ಪತ್ರೆಯಲ್ಲೆ ಮುಂದುವರಿದಿದ್ದರೆ ಬಂಟ್ವಾಳದ ರೋಗಿಯ ಬಡ ಕುಟುಂಬದ ಸ್ಥಿತಿ ಏನಾಗುತ್ತಿತ್ತು ?
ಈಗಿರುವ ಪ್ರಶ್ನೆ ಏನೆಂದರೆ, ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಯಾಕೆ ಬಡ ರೋಗಿಗಳ ಪಾಲಿಗೆ ಸದಾ ಹೌಸ್ ಫುಲ್ ಆಗಿರುತ್ತದೆ ? ಇಂತಹ ಸಂದರ್ಭದಲ್ಲಿ ಬಡ ರೋಗಿಗಳು, ಅವರ ಕುಟುಂಬದ ಸ್ಥಿತಿ ಏನು ? ರೋಗಿಯನ್ನು ಸಾಯಲು ಬಿಡುವುದೆ ? ಖಾಸಗಿ ಆಸ್ಪತ್ರೆಗೆ ದಾಖಲಿಸಿ ತಮ್ಮ ಮನೆ ಮಠ (ಇದ್ದರೆ) ಮಾರಿ ಬೀದಿಗೆ ಬರುವುದೆ ?
ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸುವುದು, ಜನಸಂಖ್ಯೆಗೆ ಅನುಗುಣವಾಗಿ ಸರಕಾರಿ ಆಸ್ಪತ್ರೆಗಳನ್ನು ಸ್ಥಾಪಿಸುವುದು ಶಾಸಕರು, ಸಂಸದರುಗಳ ಜವಾಬ್ದಾರಿ ಅಲ್ಲವೆ ? ಖಾಸಗಿ ಮೆಡಿಕಲ್ ಕಾಲೇಜುಗಳನ್ನು ಸರಣಿ ಸೂಪರ್ ಮಾರ್ಕೆಟ್ ಗಳ ತರಹ ಜಿಲ್ಲೆಯಲ್ಲಿ ಸ್ಥಾಪಿಸುತ್ತಾ ಹೋಗುವುದು, ಇರುವ ಸರಕಾರಿ ಆಸ್ಪತ್ರೆಗಳನ್ನು ಅವರಿಗೆ ಪಿಪಿಪಿ ಮಾಡೆಲ್ ನಲ್ಲಿ ಗುಟ್ಟಾಗಿ ಹಸ್ತಾಂತರಿಸುವುದು, ಬಡ ರೋಗಿಗಳನ್ನು ಅವರ ಶ್ರೀಮಂತ ವೈದ್ಯ ವಿದ್ಯಾರ್ಥಿಗಳ ಪಾಲಿಗೆ ಕ್ಲಿನಿಕಲ್ ಕ್ಲಾಸ್ ನ ಕಲಿಕೆಯ ಸಾಧನವಾಗಿ ಬಳಸಲು ಬಿಡುವುದು ಆಳುವ ಜನಗಳ ಸಾಧನೆಯೆ ? ಬೀದಿಗೊಂದರಂತೆ ತಲೆ ಎತ್ತಿರುವ "ಕಿಸೆಗೆ ಸರ್ಜರಿ" ಖ್ಯಾತಿಯ ಖಾಸಗಿ ಆಸ್ಪತ್ರೆಗಳ ಮಾಲಕರ ಗೆಳೆತನವೆ ಜಿಲ್ಲೆಯ ಜನಪ್ರತಿನಿಧಿಗಳ ಸಾಧನೆಯ ಕಿರೀಟದ ಗರಿಗಳೆ ?
ಆರೋಗ್ಯದ ಹಕ್ಕಿಗಾಗಿ, ಸರಕಾರಿ ಆಸ್ಪತ್ರೆಗಳ ಬಲವರ್ಧನೆಗಾಗಿ ಹೋರಾಟ ನಡೆಸುವುದು ಇಂದು ನಮ್ಮ ಮುಂದಿನ ಪ್ರಧಾನ ತುರ್ತು
ಮುನೀರ್ ಕಾಟಿಪಳ್ಳ