18/09/2025
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಭೇಟಿ
ಪ್ರತಿಷ್ಟಿತ ಕೆನರಾ ಬ್ಯಾಂಕಿನ ಕೇಂದ್ರ ಕಛೇರಿಯ ಎಫ್.ಐ ವಿಂಗ್ ಜನರಲ್ ಮ್ಯಾನೇಜರ್ ಎಂ. ಭಾಸ್ಕರ ಚಕ್ರವರ್ತಿ ಇವÀರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಸೆ.13ರಂದು ಭೇಟಿ ನೀಡಿದರು. ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್, ವೈದ್ಯಕೀಯ ಅಧೀಕ್ಷಕರಾದ ಡಾ. ದೇವೇಂದ್ರ ಕುಮಾರ್. ಪಿ ಹಾಗೂ ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಇವರು ಸ್ವಾಗತಿಸಿ ಬರಮಾಡಿಕೊಂಡರು.
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ ಬಾರಿ ತಾನು ಭೇಟಿ ನೀಡಿದಾಗ ಇದ್ದ ತಜ್ಞ ವೈದ್ಯರ ಸಂಖ್ಯೆ, ಸಿಬ್ಬಂದಿಗಳ ಸಂಖ್ಯೆ, ರೋಗಿಗಳ ಸಂಖ್ಯೆ ಈ ಬಾರಿ ಎಲ್ಲವೂ ಹೆಚ್ಚಾಗಿದೆ. ಆಸ್ಪತ್ರೆ ಮತ್ತು ಆಸ್ಪತ್ರೆಯ ಸೇವೆ ಕೂಡ ವಿಸ್ತಾರಗೊಳ್ಳುತ್ತಿದೆ. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮಿತದರದಲ್ಲಿ ಅತ್ಯಾಧುನಿಕ ವೈದ್ಯಕೀಯ ಸೇವೆ ನೀಡುತ್ತಿರುವ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಸೇವೆಯನ್ನು ಶ್ಲಾಘಿಸಿದ ಅವರು ಕೇಂದ್ರ ಸರಕಾರದ ಹಲವಾರು ಉಳಿತಾಯ ಮತ್ತು ವಿಮಾ ಯೋಜನೆಗಳ ವಿವರ ನೀಡುತ್ತಾ, ಪ್ರತಿಯೊಬ್ಬರೂ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವ ಅಗತ್ಯವಿದೆ ಎಂದರು.
ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರು ಮಾತನಾಡುತ್ತಾ, ಈ ಆಸ್ಪತ್ರೆಗೆ ಕೆನರಾ ಬ್ಯಾಂಕಿನಿಂದ ಕಳೆದ ವರ್ಷ ನೀಡಲ್ಪಟ್ಟ 10ಲಕ್ಷ ರೂಪಾಯಿಗಳ ವಿಶೇಷ ದೇಣಿಗೆಯನ್ನು ಸ್ಮರಿಸಿದರು. ಈ ಹಣದಲ್ಲಿ ಕಾರ್ಡಿಯಾಕ್ ಮೋನಿಟರ್ ಮತ್ತು ಸಿರಿಂಜ್ ಪಂಪು ಖರೀದಿಸಿದ್ದು, ಇದು ರೋಗಿಗಳ ತುರ್ತುಚಿಕಿತ್ಸೆಗೆ ಬಹಳ ಸಹಕಾರಿಯಾಗಿದೆ ಎಂದರು. ವೈದ್ಯಕೀಯ ಸೇವೆಗಳನ್ನು ವಿವರಿಸಿದ ಅವರು ಇಲ್ಲಿ ನುರಿತ ತಜ್ಞ ವೈದ್ಯರ ತಂಡವಿದ್ದು, ಹಲವಾರು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಮಿತದರದಲ್ಲಿ ನಡೆಸಲಾಗುತ್ತಿದೆ. ಮೊಣಕಾಲು, ಸೊಂಟದಕೀಲುಗಳ ಬದಲಿ ಶಸ್ತ್ರಚಿಕಿತ್ಸೆಗಳಂತಹ ದುಬಾರಿ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮಾಡಲಾಗುತ್ತಿದೆ. ಶೀಘ್ರದಲ್ಲಿ ಎಂ.ಆರ್.ಐ ಸೇವೆ ಕೂಡ ದೊರೆಯಲಿದೆ ಎಂದರು.
ವೈದ್ಯಕೀಯ ಅಧೀಕ್ಷಕರಾದ ಡಾ. ದೇವೇಂದ್ರ ಕುಮಾರ್. ಪಿ ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.